ಅನುಭವ ಮಂಟಪ

ಬೀದರ್ ಜಿಲ್ಲೆಯ ಕಲ್ಯಾಣಪಟ್ಟಣದಲ್ಲಿ ಕಲಚೂರ್ಯರ ಅರಸನಾದ ಬಿಜ್ಜಳನ ಆಳ್ವಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವೇಶ್ವರ ಸ್ಥಾಪಿಸಿದ ಒಂದು ತತ್ತ್ವಜಿಜ್ಞಾಸೆ ಸಂಸ್ಥೆ. ಪ್ರಾಯಶಃ ಇದು 1160ರಲ್ಲಿ ಕಲ್ಯಾಣ ಪಟ್ಟಣದ ತ್ರಿಪುರಾಂತಕ ಕೆರೆಯ ಮೇಲಿನ ತ್ರಿಪುರಾಂತಕರಗುಡ್ಡದಲ್ಲಿ ಸ್ಥಾಪಿಸಲ್ಪಟ್ಟಿತೆಂದು ಹೇಳುತ್ತಾರೆ. ಇದರ ಅಧ್ಯಕ್ಷ ಪ್ರಭುದೇವ. ಕಾರ್ಯದರ್ಶಿ ಚನ್ನಬಸವಣ್ಣ, ಸದಸ್ಯರು ಅಖಿಲಭಾರತದ ಶಿವಶರಣರು. ಇದು ನಾಲ್ಕು ಮಹಾದ್ವಾರ, 36 ಕಂಬಗಳಿಂದ ಕೂಡಿತ್ತೆಂದು ತಿಳಿದುಬಂದಿದೆ. ಇದರ ಅಧ್ಯಕ್ಷಪೀಠವೇ ಶೂನ್ಯಸಿಂಹಾಸನ. ಅನುಭವ ಮಂಟಪದ ಹೆಸರು ವಿಶೇಷವಾಗಿ ಕಾಲಜ್ಞಾನವಚನಗಳಲ್ಲಿ ಕಂಡುಬಂದಿದೆ. ಇದನ್ನು ವೀರಶೈವರ ಹೃದಯವೆಂದು ಹಲವು ವಿದ್ವಾಂಸರು ಕರೆದಿದ್ದಾರೆ. ಈ ಮಂಟಪ ಕನ್ನಡ ಸಾಹಿತ್ಯಾಭಿವೃದ್ಧಿಗೆ ಬಹಳವಾಗಿ ಸಹಾಯ ಮಾಡಿತೆಂದು ಹೇಳಬಹುದು.									
	
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ